ಮಂಗಳವಾರ, ಮಾರ್ಚ್ 2, 2010

ಸ್ವಾತಂತ್ರ್ಯ ಎನ್ನುವುದು ಅದೆಷ್ಟು ಅಮೂಲ್ಯ ಅಲ್ಲವೇ?



`ನಮ್ಮದು ಚೈನಾದಲ್ಲಿ ನೆಲೆಸಿದ್ದ ಟಿಬೇಟಿಯನ್ ಮೂಲದ ಕುಟುಂಬ, ಮೂಲತಃ ರಾಜಮನೆತನದವರಾದ ಕಾರಣ ವಿಶಾಲವಾದ ಮನೆಯಿತ್ತು,ಮನೆಯ ತುಂಬಾ ಜನರಿದ್ದರು,125 ಮಂದಿ ಕೆಲಸಗಾರರಿದ್ದರು.ಇದ್ದಕ್ಕಿದ್ದಂತೆ ಒಂದು ದಿನ ನಮ್ಮ ಮನೆಯ ಮೇಲೆ ದಾಳಿ ನಡೆಯಿತು.ನಮ್ಮ ಮನೆಯನ್ನು ವಿಭಾಗಿಸಿ ಎಲ್ಲಾ ನೌಕರರಿಗೂ ನೀಡಲಾಯಿತು, ನಮ್ಮ ದೊಡ್ಡ ಕುಟುಂಬಕ್ಕೆ ಕೇವಲ ಒಂದೇ ಕೋಣೆ ಕೊಡಲಾಯಿತು.ನಮ್ಮ ಎಲ್ಲಾ ಆಸ್ತಿ-ಪಾಸ್ತಿಗಳೂ ಹರಿದು ಹಂಚಿ ಹೋದವು.ಅಲ್ಲದೆ ನಮ್ಮ ಕುಟುಂಬದವರು ಕಮ್ಯುನಿಸಮ್ ನ್ನು ಬೆಂಬಲಿಸದ ಕಾರಣ ನನ್ನ ತಾತನನ್ನು(ತಂದೆಯ ತಂದೆ)ಕೊಲ್ಲಲಾಯಿತು,ಉಳಿದವರ ಉಗುರುಗಳ ಕೆಳಗೆ ಬಿದಿರಿನ ಮೊಳೆಗಳನ್ನು ಚುಚ್ಚಿ ಹಿಂಸೆ ನೀಡಲಾಗುತ್ತಿತ್ತು.ಹಿಂಸೆ ತಾಳಲಾರದೆ ನನ್ನ ತಾಯಿಯ ತಂದೆ ನದಿಯಲ್ಲಿ ಹಾರಿ ಪ್ರಾಣ ಕಳೆದುಕೊಂಡರು.ಶಾಲೆಯಲ್ಲಿಯೂ ಸಹ ಬಹಳ ತಾರತಮ್ಯ ನಡೆಯುತ್ತಿತ್ತು. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಕಮ್ಯುನಿಸಮ್ ನ್ನು ಒಂದು ವಿಷಯವಾಗಿ ಹೇಳಿಕೊಡಲಾಗುತ್ತಿತ್ತು, ನಮ್ಮ ಆಸಕ್ತಿ, ಸಾಧನೆ ಹಾಗೂ ಕುಟುಂಬದ ಹಿನ್ನೆಲೆಯ ಆಧಾರದ ಮೇಲೆ ಕಮ್ಯುನಿಸ್ಟ್ ಸೈನಿಕರ ರಕ್ತದ ಸಂಕೇತವಾದ ಕೆಂಪು ಧ್ವಜವನ್ನು compliment ಆಗಿ ನೀಡಲಾಗುತ್ತಿತ್ತು.ಆ ಧ್ವಜವನ್ನು ಕತ್ತಿನ ಸುತ್ತ ಸುತ್ತಿಕೊಂಡ ಮಕ್ಕಳು ಬಹಳ ಪ್ರಭಾವಿ ಎನ್ನಿಸಿಕೊಳ್ಳುತ್ತಿದ್ದರು, ಅವರು ಧ್ವಜವಿಲ್ಲದ ನಮ್ಮನ್ನು ಶತ್ರುಗಳ ಮಕ್ಕಳು ಎಂದು ಕರೆಯುತ್ತಿದ್ದರು.ನಮ್ಮ ಮೇಲೆ ದಬ್ಬಾಳಿಕೆ ನಡೆಸುವ ಅಧಿಕಾರ ಕೂಡ ಅವರಿಗಿತ್ತು, ಕಮ್ಯುನಿಸ್ಟ್ ಶಿಕ್ಷಕರು ಕೂಡ ಅದನ್ನು ತಡೆಯುವ ಪ್ರಯತ್ನ ಮಾಡುತ್ತಿರಲಿಲ್ಲ.

ಹೀಗೆ ಬಾಲ್ಯವನ್ನು ಕಳೆದ ನಾನು ಅಲ್ಲಿಯೇ ಇದ್ದರೆ ನೆಮ್ಮದಿಯಾಗಿರಲು ಸಾಧ್ಯವಿಲ್ಲ ಎಂದು ನನ್ನ ತಂದೆಗೆ ಅನ್ನಿಸಿರಬೇಕು,ಅವರು ನನ್ನನ್ನು ಕಾಲೇಜ್ ಶಿಕ್ಷಣಕ್ಕಾಗಿ ಭಾರತಕ್ಕೆ ಕಳುಹಿಸಿದರು.ಇಲ್ಲಿ ಬಂದ ಮೇಲೆ ಇಲ್ಲಿನ ಟಿಬೆಟ್ ಯುವಕರನ್ನು ಸಂಘಟಿಸುವ ಕೆಲಸಕ್ಕೆ ಮುಂದಾದೆ. ಈ ವಿಷಯದ ಸುಳಿವು ಅಲ್ಲಿನ ಕಮ್ಯುನಿಸ್ಟ್ ಸರಕಾರಕ್ಕೆ ಹೇಗೋ ಸಿಕ್ಕಿ, ಈಗ ಚೈನಾ-ಟಿಬೆಟ್ ಬಾಗಿಲು ನನಗಾಗಿ ಮುಚ್ಚಿಹೋಗಿದೆ.ಅಲ್ಲಿ ಹೋದರೆ ಖಂಡಿತಾ ಹಿಂತಿರುಗಿ ಬರಲು ಸಾಧ್ಯವಿಲ್ಲ, ಕಮ್ಯುನಿಸ್ಟರು ನನ್ನನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ತಂದೆ ತೀರಿಕೊಂಡಾಗಲೂ ನನಗೆ ವಿಷಯವನ್ನೇ ತಿಳಿಸಿರಲಿಲ್ಲ. ನಮ್ಮ ಕುಟುಂಬ ಈಗ ಛಿದ್ರ-ಛಿದ್ರವಾಗಿದೆ, ಅವರನ್ನೆಲ್ಲಾ 12 ವರ್ಷಗಳಿಂದ ನಾನು ನೋಡಿಲ್ಲ, ಇನ್ನೆಂದಾದರೂ ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ.'

ಹೀಗೆ ಆತ ಹೇಳುತ್ತಿದ್ದರೆ ನಾನು ದಂಗಾಗಿ ಹೋಗಿದ್ದೆ.ಇಂಥ ವಿಷಯಗಳನ್ನೆಲ್ಲ ಪತ್ರಿಕೆ-ಪುಸ್ತಕಗಳಲ್ಲಿ ಓದುತ್ತಿದ್ದರೂ ಸ್ವಂತ ಅನುಭವವನ್ನು ಹೀಗೆ ಕಿವಿಯಾರೆ ಕೇಳಿಸಿಕೊಂಡಿದ್ದು ಅದೇ ಮೊದಲು.ಈ`ಸ್ವಾತಂತ್ರ್ಯ' ಎಂಬ ಶಬ್ದವನ್ನು ಕೇಳಿದರೆ ನಮಗೆ ಏನೂ ವಿಶೇಷ ಎನ್ನಿಸುವುದೇ ಇಲ್ಲ.ನಾವೆಲ್ಲ ಹುಟ್ಟುವುದಕ್ಕಿಂತ ಮುಂಚೆಯೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು.ಪ್ರತೀವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರೂ ಅದೊಂದು ನಾವು ಆಚರಿಸಿಕೊಂಡು ಬಂದ ರೂಢಿಯಷ್ಟೇ.

`ನಮಗೆಲ್ಲಾ ಅದು ಅನಾಯಾಸವಾಗಿ ದೊರಕುವ ಸಹಜ ಸ್ಥಿತಿ ಎಂದು ಅಲಕ್ಷಿಸುವ ಮಟ್ಟಕ್ಕೆ ಹೋಗಿದ್ದೇವೆ.ನನಗೂ ಸ್ವಾತಂತ್ರ್ಯದ ಬಗ್ಗೆ ನಮ್ಮ ಜೋಭದ್ರಗೇಡಿ ರಾಜಕಾರಣಿಗಳು ತಮ್ಮ ಚರ್ವಿತಚರ್ವಿಣ ಭಾಷೆಯಲ್ಲಿ ಉದ್ದುದ್ದ ಭಾಷಣ ಕೊಡುವಾಗ, ಅವರು ಹೊಗಳುತ್ತಿರುವ ಸ್ವಾತಂತ್ರ್ಯ ಇದ್ದರೆಷ್ಟು ಹೋದರೆಷ್ಟು ಎನ್ನುವ ಉದಾಸೀನ ಮೂಡುತ್ತದೆ'.ಮಿಲೇನಿಯಮ್ ಸರಣಿಯ 'ಮಹಾಯುದ್ಢ-2' ಪುಸ್ತಕದ ಮುನ್ನುಡಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ಈ ಮಾತುಗಳನ್ನು ನೋಡಿದರೆ ಇದಕ್ಕೆ ನಾವ್ಯಾರೂ ಹೊರತಲ್ಲ ಎನ್ನಿಸುತ್ತದೆ.

ಮೇಲೆ ನೀಡಿದ ನನ್ನ ಸ್ನೇಹಿತರೊಬ್ಬರ ಅನುಭವ ತೀರಾ ದಾರುಣವೆಂದೆನಿಸದಿರಬಹುದು, ಆದರೆ ಕಮ್ಯುನಿಸಮ್ ನ ಅತ್ಯಂತ ಹೇಯ ಕೃತ್ಯಗಳಿಗೆ ಸಾಕ್ಷಿಯಾದ ಇಪ್ಪತ್ತನೇ ಶತಮಾನದಲ್ಲಿ ಜನರು ಸ್ವಾತಂತ್ರಕ್ಕಾಗಿ ಜೀವನಪರ್ಯಂತ ಹಪಹಪಿಸಿದ್ದಾರೆ,ಪ್ರಾಣದ ಹಂಗು ತೊರೆದು ಹೋರಾಡಿದವರಲ್ಲಿ ಹೆಚ್ಚಿನವರು ಅಮಾನುಷವಾಗಿ ಕೊಲೆಯಾಗಿ ಹೋಗಿದ್ದಾರೆ.ಯಾವುದೋ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದ ಜನರಿಂದಾಗಿ ರಕ್ತದ ಕೋಡಿಯೇ ಹರಿದಿದೆ.ಕಮ್ಯುನಿಸಮ್ ನ ದಬ್ಬಾಳಿಕೆಗೆ ಒಳಗಾದವರಲ್ಲಿ ಒಬ್ಬರಾದ ಪೋಲಿಷ್ ಅಧಿಕಾರಿ ಸ್ಲಾಮೋಮಿರ್ ರಾವಿಸ್ ಅವರ The Long Walk'ಪುಸ್ತಕವನ್ನು ತೇಜಸ್ವಿಯವರು 'ಮಹಾ ಪಲಾಯನ' ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.ಅದನ್ನು ಓದಿದರೆ ಮಾನವ ಇತಿಹಾಸದಲ್ಲಿ ಬಹುಶಃ ಇದೇ the longest walk ಇರಬಹುದೇನೋ ಎನಿಸುತ್ತದೆ.ಉತ್ತರದ ಆರ್ಕಿಟೆಕ್ಟ್ ಪ್ರದೇಶದ ಹತ್ತಿರವಿರುವ ಸೈಬೀರಿಯಾದಲ್ಲಿ ಕಮ್ಯುನಿಸ್ಟ್ ಆಡಳಿತಗಾರರಿಂದ ಶ್ರಮ ಶಿಬಿರಗಳು ನಡೆಸಲ್ಪಡುತ್ತಿದ್ದವು.ಕಮ್ಯುನಿಸಮ್ ನ್ನು ವಿರೋಧಿಸಿದಕ್ಕಾಗಿ ಲೇಖಕರಿಗೆ ದೊರೆತ ಶಿಕ್ಷೆ 25 ವರ್ಷಗಳ ಕಾಲ ಶ್ರಮ ಶಿಬಿರದಲ್ಲಿ ಖೈದಿಯಾಗಿರುವುದು.ಜೀವನಪರ್ಯಂತ ಕತ್ತೆ ದುಡಿದ ಹಾಗೆ ದುಡಿದು, ದೌರ್ಜನ್ಯದಲ್ಲಿ ಬಾಳುವುದಕ್ಕಿಂತ ಸಾಯುವುದು ವಾಸಿ ಎಂದುಕೊಂಡ ಅವರು ಸಮಾನ ಮನಸ್ಕರ ಒಂದು ಗುಂಪು ಕಟ್ಟಿಕೊಂಡು ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ.ಮರಗಟ್ಟುವ ಆ ಚಳಿಯಲ್ಲಿ ವಿಶಾಲವಾದ ಸಮುದ್ರದಂತಹ ಕಾಡುಗಳು, ಬೆಟ್ಟ ಗುಡ್ಡ, ನದಿಗಳು, ಮರುಭೂಮಿಗಳು ಎಲ್ಲವನ್ನೂ ದಾಟಿ ಅವರು ಭಾರತವನ್ನು ಸೇರಲು ಒಂದು ವರ್ಷಗಳ ಕಾಲ ಕಾಲ್ನಡಿಗೆಯಲ್ಲಿ ಕ್ರಮಿಸಿದ ದೂರ ಬರೋಬ್ಬರಿ 4000 ಮೈಲಿಗಳಿಗಿಂತಲೂ ಹೆಚ್ಚು!! ಅವರು ಆ ಸಂದರ್ಭದಲ್ಲಿ ಪಟ್ಟ ಕಷ್ಟ, ಅನುಭವಿಸಿದ ನೋವು, ಮರುಭೂಮಿಯ ವಿಷಹಾವುಗಳನ್ನೂ ಬಿಡದೆ ಸಿಕ್ಕಸಿಕ್ಕ ಪ್ರಾಣಿಗಳನ್ನು ತಿಂದು ಜೀವ ಉಳಿಸಿಕೊಂಡ ಪರಿಯನ್ನು ಓದಿದರೆ ನಿಜಕ್ಕೂ ಸಂಕಟವಾಗುತ್ತದೆ.


ಇನ್ನು ಲೇಖಕರು ತಮ್ಮ ಗುರಿಯನ್ನಾಗಿ ಭಾರತವನ್ನೇಕೆ ಆಯ್ಕೆ ಮಾಡಿಕೊಂಡರು ಎಂದು ಯೋಚಿಸಿ ನೋಡಿ, ನಾವೆಷ್ಟು ಪುಣ್ಯವಂತರು ಎಂದು ತಿಳಿಯುತ್ತದೆ!ಅಲ್ಲದೇ ಯಹೂದಿಗಳಿಗೆ, ಪಾರ್ಸಿಗಳಿಗೆ,ಟಿಬೆಟಿನ ಬೌದ್ಧರಿಗೆ, ನಿರಾಶ್ರಿತ ಮುಸ್ಲಿಂ-ಕ್ರಿಶ್ಚಿಯನ್ನರಿಗೆ ಎಲ್ಲರಿಗೂ ಆಶ್ರಯ ನೀಡಿದ ದೇಶ ನಮ್ಮದು.ನೀವೇನೇ ಹೇಳಬಹುದು,ಬಡತನ,ನಿರುದ್ಯೋಗ,ಭೃಷ್ಟತೆ,ಅನಕ್ಷರತೆಗಳ ನಿರ್ಮೂಲನೆಗೆ ಕಮ್ಯುನಿಸಂ ಸರಿಯಾದ ಮಾರ್ಗ ಎಂದೋ ಅಥವಾ ಎಲ್ಲರಿಗೂ ಅಶ್ರಯ ನೀಡುವ ಉದಾರ ಮನೋಭಾವನೆಯೇ ನಮಗೆ ಮುಳುವಾಗಿದೆ ಎಂದೋ ವಾದಿಸಬಹುದು.ಆದರೆ ಬಡತನದಂತಹ ಸಮಸ್ಯೆ ಯಾವ ದೇಶದಲ್ಲಿಲ್ಲ ಹೇಳಿ?ಚೈನಾದ ನನ್ನ ಸ್ನೇಹಿತರ ಕುಟುಂಬದ ಆಸ್ತಿಯನ್ನು ಹಂಚಿಕೊಂಡ ನೌಕರರೆಲ್ಲರೂ ಅದನ್ನು ಉಳಿಸಿಕೊಂಡು,ಬೆಳೆಸುವುದು ಹೇಗೆಂದು ತಿಳಿಯದೆ ನಾಲ್ಕೇ ವರ್ಷದಲ್ಲಿ ಮತ್ತೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದರಂತೆ.ಹಾಗಾಗಿ ಇಂಥ ಕ್ಷುಲ್ಲಕ ಕಾರಣಗಳಿಗೆ ದೇಶದ ಕಟ್ಟಕಡೆಯ ಪ್ರಜೆಗೂ ಸಮಾನ ಅವಕಾಶ ನೀಡುವ ಪ್ರಜಾಪ್ರಭುತ್ವವನ್ನು ಹಳಿಯುವುದು ತಪ್ಪು ಅನ್ನಿಸುತ್ತದೆ ನನಗೆ.

ನಾನು ಇತಿಹಾಸವನ್ನು ತುಂಬಾ ಓದಿಕೊಂಡವಳಲ್ಲ, ಕಮ್ಯುನಿಸಂ, ಮಾವೊ ಝಿಡುಂಗ್ ನ ಮಾವೊವಾದಗಳ ಬಗ್ಗೆ ಗೊತ್ತಿರುವುದು ಚೂರುಪಾರು ಮಾತ್ರ.ಆದರೆ ಇಂಥ ಅನುಭವಗಳನ್ನು ಸ್ವತಃ ಕೇಳಿದಾಗ ನಮಗೆ ದೊರೆತಿರುವ ಸ್ವಾತಂತ್ರ್ಯ ಅದೆಷ್ಟು ಅಮೂಲ್ಯ ಎಂದೆನಿಸಿತು.ಹಾಗೆಯೇ ನಮ್ಮ ಹಿರಿಯರು ಕೊಟ್ಟ ಬಳುವಳಿಯಾದ ಪ್ರಜಾಪ್ರಭುತ್ವವನ್ನು ಭೃಷ್ಟ ರಾಜಕಾರಣಿಗಳಿಂದ, ಕೆಟ್ಟ ಜನರಿಂದ ದುರುಪಯೋಗಗೊಳ್ಳದಂತೆ ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎನಿಸಿತು, ನೀವೂ ಒಪ್ಪುತ್ತೀರೆಂದು ಭಾವಿಸುತ್ತೇನೆ.