ಬುಧವಾರ, ಏಪ್ರಿಲ್ 7, 2010

ದೇವರೇ, please save my Nation from all dirty issues....!!


ಖಂಡಿತವಾಗಲೂ ಈ ದುರಂತ ಯಾವ ಪಾಕಿಸ್ತಾನಿ ಭಯೋತ್ಪಾದಕರ ದಾಳಿಗೂ ಕಮ್ಮಿಯಿಲ್ಲ.ಛತ್ತೀಸಗಡದ ದಂಟೆವಾಡ ಜಿಲ್ಲೆಯಲ್ಲಿ ಭೀಕರ ಹತ್ಯಾಕಾಂಡ ನಡೆಸಿರುವ ನಕ್ಸಲರು 76 ಮಂದಿ CRPF ಯೋಧರನ್ನು ಬಲಿ ತೆಗೆದುಕೊಂಡಿದ್ದಾರೆ.ದಟ್ಟ ಕಾನನದಲ್ಲಿ ನಮ್ಮ ಅಮೂಲ್ಯ ಸೈನಿಕರ ರಕ್ತಪಾತವಾಗಿದೆ.ನಕ್ಸಲ್ ಚಳುವಳಿಯ ಇತಿಹಾಸದಲ್ಲೇ ಅತ್ಯಂತ ಭೀಕರ ಕೃತ್ಯ ಇದು ಎನ್ನುವುದು ತೀರ ಸ್ಪಷ್ಟ.ಗಾಬರಿ ಹುಟ್ಟಿಸುವ ವಿಷಯವೆಂದರೆ ಈ ರಾಷ್ಟ್ರವಿರೋಧಿ ಸಂಘಟನೆಯ ಅಟ್ಟಹಾಸ ಅಪಯಕಾರಿ ಮಟ್ಟದಲ್ಲಿ ಹೆಚ್ಚುತ್ತಲೇ ಇದೆ.ಅಂಕಿ ಅಂಶಗಳ ಪ್ರಕಾರ ನಕ್ಸಲ್ ದಾಳಿಯಲ್ಲಿ ಸತ್ತವರ ಸಂಖ್ಯೆ 1996ರಲ್ಲಿ 156ರಷ್ಟಿದ್ದರೆ 2009 ರಲ್ಲಿ 1134ರಷ್ಟಾಗಿದೆ!!BBC ಮೂಲದ ಪ್ರಕಾರ ನಕ್ಸಲ್ ಚಳುವಳಿಯ ಈ 20 ವರ್ಷಗಳಲ್ಲಿ ಬಲಿಯಾದ ಜೀವಗಳು 6000ಕ್ಕೂ ಹೆಚ್ಚು...

'Operation Green hunt!'ಪಿ.ಚಿದಂಬರಂ ಅವರ ನೇತೃತ್ವದಲ್ಲಿ ನಕ್ಸಲರ ವಿರುದ್ಧ ಹೀಗೊಂದು ಕಾರ್ಯಾಚರಣೆ ಕೆಲವೊಂದು ತಿಂಗಳುಗಳಿಂದ ನಡೆಯುತ್ತಿದೆ ಎಂದು ನೀವೆಲ್ಲಾ ಕೇಳಿಯೇ ಇರುತ್ತೀರಿ.ಪ್ರಧಾನಿ ಮನನೋಹನ್ ಸಿಂಗ್ ಅವರು ಕೂಡ ನಕ್ಸಲರು ಭಾರತದ ರಾಷ್ಟ್ರೀಯ ಭದ್ರತೆಗೆ ಅತಿ ದೊಡ್ಡ ಆಂತರಿಕ ಅಪಾಯ ಎಂದು ಘೋಷಿಸಿದ್ದಾರೆ.ಈ ಎಲ್ಲಾ ಹಿನ್ನೆಲೆಯಲ್ಲಿ ನಕ್ಸಲರ ಈ ದಾಳಿ ಸರ್ಕಾರಕ್ಕೆ ಅತ್ಯಂತ ದೊಡ್ಡ ಹಿನ್ನಡೆಯೇ ಸರಿ.ಅಮಾಯಕ ಜನರ ಸಾವಿನ ನೋವಿನ ಜೊತೆಗೆ ಈ ಸಂಘಟನೆ ದೇಶಕ್ಕೆ,ಜನರ ನೆಮ್ಮದಿಗೆ ಮಹಾ ಕಂಟಕವಾಗಿರುವುದು ಭಯಾನಕ ಸತ್ಯ.ಇಷ್ಟು ದಿನ ಪಾಕಿಸ್ತಾನಿ ಭಯೋತ್ಪಾದಕರ ಗುಂಡಿನ ಆರ್ಭಟದ ನಡುವೆ ಮಂಕಾಗಿ ಕಾಣುತ್ತಿದ್ದ ನಕ್ಸಲಿಸಂ ನಂತ ಸಮಸ್ಯೆ ಈಗ ನಿಜಕ್ಕೂ ಬೃಹತ್ತಾಗಿ ಬೆಳೆದು ನಿಂತಿದೆ.

ಪಾಕಿಸ್ತಾನವನ್ನಂತೂ ಬಿಡಿ,ಅದು ನಮ್ಮ default enemy!ಪಕ್ಕದ ಚೀನಾ ಕೂಡ ನಮ್ಮ ನೆಲಕ್ಕಾಗಿ ಹಸಿದು ಕುಳಿತಿರುವುದು ಹೊಸ ವಿಷಯವೇನಲ್ಲ.ಅರುಣಾಚಲದ ಗಡಿಯವರೆಗೂ ರೈಲ್ವೇ ಸಂಪರ್ಕವನ್ನು ಏರ್ಪಡಿಸಿರುವುದಲ್ಲದೆ, ಸೈನಿಕರನ್ನೂ, ಶಸ್ತ್ರಾಸ್ತ್ರಗಳನ್ನೂ ಗಡಿ ಭಾಗಕ್ಕೆ ನಿರಂತರವಾಗಿ ರವಾನಿಸುತ್ತ ಭಾರತದ ವಿರುದ್ಧ ಯುದ್ಧಕ್ಕೆ ಎಲ್ಲಾ ತಯಾರಿಯನ್ನೂ ಮಾಡಿಕೊಳ್ಳುತ್ತಿದೆ.ಹೀಗೆ ಅರುಣಾಚಲ ಪ್ರದೇಶ ಕೂಡ ಇನ್ನೊಂದು ಕಾಶ್ಮೀರವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದರೆ ನಾವು ಅಭಿಮಾನಿ ಭಾರತೀಯರು ಚಿಲ್ಲರೆ ರಾಜಕೀಯ ಕಸರತ್ತುಗಳು, ಯಾವುದೇ ಪ್ರಯೋಜನಕ್ಕೆ ಬಾರದ ವಿವಾದಗಳ ಬಾಲ ಹಿಡಿದುಕೊಂಡು ಮಜಾ ಅನುಭವಿಸುತ್ತಿದ್ದೇವೆ.ಇತ್ತ ಇಡೀ ಜಗತ್ತು ತಮಾಷೆ ನೋಡುತ್ತಿದೆ.ಹೇಗೆ ಅಂತೀರಾ?

ನಮ್ಮ ದೇಶದ ಸಾಧಕರನ್ನು,ಜಗತ್ತು ಯಾವ ವ್ಯಕ್ತಿಗಳ ಮೂಲಕ ಭಾರತವನ್ನು ಗುರುತಿಸುವುದೋ ಅಂತ ವ್ಯಕ್ತಿಗಳನ್ನೂ ಸಹ ಸಲ್ಲದ ಕಾರಣಕ್ಕೆ ಸಾರ್ವಜನಿಕವಾಗಿ ಅವಮಾನಿಸಿ, ಪತ್ರಿಕೆಗಳಲ್ಲಿ ನಿಂದಿಸಿ, ನಮ್ಮನ್ನು ನಾವೇ ಜಗತ್ತಿನ ಮುಂದೆ ಕುಬ್ಜರನ್ನಾಗಿ ಬಿಂಬಿಸಿಕೊಳ್ಳುವ ಕೆಟ್ಟ ಚಟ ನಮಗಂಟಿಕೊಂಡು ಬಹಳ ವರ್ಷಗಳೇ ಆಯಿತು.ಅಷ್ಟಕ್ಕೂ ಸಾನಿಯಾ ಮಿರ್ಜಾ ಶೊಯೆಬ್ ನನ್ನು ಮದುವೆಯಾದರೆ ಅದನ್ನು ನಾವ್ಯಾಕೆ national issue ವನ್ನಾಗಿ ಮಾಡಬೇಕು?ಆತ ಪಾಕಿಸ್ತಾನಿಯೇ ಇರಬಹುದು, ಆತನ ಕ್ರಿಕೆಟ್ ಬದುಕಿನಲ್ಲಿ ಹಲವಾರು ವಿವಾದಗಳಿರಬಹುದು, ಆತನಿಗೆ ಈಗಾಗಲೇ ಮದುವೆಯಾಗಿದೆ ಎಂಬ ಆರೋಪವೂ ಇರಬಹುದು.ಆದರೆ ಇವಲ್ಲಾ ಸಾನಿಯಾಗೆ ತಿಳಿಯದ ವಿಷಯಗಳಲ್ಲ,ತನ್ನ ಬಾಳ ಸಂಗಾತಿಯಾಗುವವನು ಹೇಗಿರಬೇಕು ಎಂದು ನಮಗಿಂತ ಚೆನ್ನಾಗಿ ಆಕೆಗೆ ಗೊತ್ತಿದೆ.ಒಂದು ವೇಳೆ ಆಕೆಯ ನಿರ್ಧಾರ ತಪ್ಪು ಅಂತಲೇ ತಿಳಿದುಕೊಳ್ಳೋಣ, ಆದರೆ ಈ ಕಾರಣಕ್ಕೆ ದೇಶದೆಲ್ಲೆಡೆ ಈ ಪರಿಯ ಸಂಚಲನ ಸರಿಯೇ? ಒಬ್ಬ ವಿದೇಶೀ ಪ್ರಜೆಯ ದೃಷ್ಟಿಯಲ್ಲಿ ನೋಡಿ, ಒಬ್ಬ ಭಾರತೀಯ ಟೆನ್ನಿಸ್ ತಾರೆ ಪಾಕಿಸ್ತಾನಿ ಕ್ರಿಕೆಟ್ ಆಟಗಾರನನ್ನು ಮದುವೆಯಾಗುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನದೆಸುತ್ತವೆ ಎಂದು ತಿಳಿದಾಗ ಇಡೀ ಭಾರತೀಯ ಮನಸ್ಥಿತಿಯೇ ಆತನಿಗೆ ತಮಾಷೆಯಾಗಿ,sickening ಆಗಿ ಕಾಣುವುದಿಲ್ಲವೇ?

ಇನ್ನು ಅಮಿತಾಭ್ ಬಚ್ಚನ್ ,ಶಾರುಖ್ ರ ಕಥೆಯೂ ಇದಕ್ಕಿಂತ ಭಿನ್ನವಾಗೇನಿಲ್ಲ.ಅಮಿತಾಭ್ ಗುಜರಾತ್ ನ ಪ್ರವಾಸೋದ್ಯಮ ರಾಯಭಾರಿಯಾದ ವಿಷಯ ಅಥವಾ ಶಾರುಖ್ ನ IPL ಆಟಗಾರರ ಕುರಿತ ಹೇಳಿಕೆಯನ್ನು ಅನಗತ್ಯವಾಗಿ ವಿವಾದವನ್ನಾಗಿಸಿದವರು ನಾವು.ಅಷ್ಟಕ್ಕೂ ರಾಯಭಾರಿ ರಾಜ್ಯವನ್ನು ಪ್ರತಿನಿಧಿಸುತ್ತಾನೆ, ಸರ್ಕಾರವನ್ನಲ್ಲ ಎಂದು ಯೋಚಿಸುವಷ್ಟೂ ನಾವು ಪ್ರಬುದ್ಧರಲ್ಲವೇ? ಸಾಧನೆಗೈದಾಗ ಹೊಗಳಿ ಅಟ್ಟಕ್ಕೇರಿಸಿ ದೇವಸ್ಥಾನ ಕಟ್ಟುವ ನಾವು, ಕ್ಷುಲ್ಲಕ ವಿಷಯಗಳಿಗೆ ನಮ್ಮ ಹೆಮ್ಮೆಯ ಸಾಧಕರನ್ನು ಮುಜುಗರಕ್ಕೀಡುಮಾಡುವುದಲ್ಲದೆ, ಜಗತ್ತಿನ ಮುಂದೆ ಹಾಸ್ಯದ ವಸ್ತುವನ್ನಾಗಿಸುತ್ತೇವೆ.


ಇನ್ನು ದೇಶದ ರಾಜಕಾರಣವೆನ್ನುವುದು ತೀರಾ ಕೀಳುಮಟ್ಟಕ್ಕಿಳಿದಿದೆ.ಕರ್ನಾಟಕ ಸರ್ಕಾರದ ಜುಟ್ಟು ರಾಜ್ಯದ ಸಂಪತ್ತನ್ನು ಕಾನೂನುಬಾಹಿರವಾಗಿ ಕೊಳ್ಳೆ ಹೊಡೆಯುತ್ತಿರುವ ರೆಡ್ಡಿಗಳ ಕೈಯಲ್ಲಿದೆ ಎನ್ನುವುದು ಬಹಿರಂಗ ಸತ್ಯ. ಇತ್ತೀಚಿಗೆ ಅವರ ಆರ್ಭಟ ಕಡಿಮೆಯಾಗಿದ್ದರೂ ಈ ವಿಷಯದಲ್ಲಿ ನಮ್ಮ ಮುಖ್ಯಮಂತ್ರಿಗಳು ಅಸಹಾಯಕರು.ಚಿಲ್ಲರೆ ರಾಜಕೀಯ ಮಾಡುವುದು, ಅತ್ಯಂತ ಬಾಲಿಶ ಹೇಳಿಕೆಗಳನ್ನು ನೀಡಿ ಬೇರೆಯವರ ಬಾಯಿಗೆ ಆಹಾರವಾಗುವುದು ಇವೆಲ್ಲ ರಾಜಕೀಯದಲ್ಲಿ ತೀರಾ ಸಾಮಾನ್ಯ.ಇತ್ತೀಚಿಗೆ ಮಾಯಾವತಿಯವರಿಗೆ ನೋಟಿನ ಹಾರ ಹಾಕಿದ ವಿವಾದ ಹುಟ್ಟಿಕೊಳ್ಳುತ್ತಿದ್ದಂತೆ , ತಮ್ಮನ್ನು ದಲಿತ್ ಕಿ ಬೇಟಿ ಎಂದು ಕರೆದುಕೊಳ್ಳುವ ಆಕೆ ಈ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡರು.ಇದೆಲ್ಲಾ ನನ್ನ ವಿರುದ್ಧ ಮೇಲಿನ ಜಾತಿಯವರ ಪಿತೂರಿ ಎಂದ ಆಕೆ ಜನರ ಮುಂದೆ ತಾನೊಬ್ಬ victim ಎಂಬಂತೆ ಬಿಂಬಿಸಿಕೊಂಡು, ಅನುಕಂಪ ಗಿಟ್ಟಿಸಿಕೊಂಡರು. ಇರಲಿ ಬಿಡಿ, ಮಾಯಾವತಿಯವರ ಕೆಳ ಮಟ್ಟದ ರಾಜಕಾರಣ ಹೊಸದೇನಲ್ಲ , ಆದರೆ ಆರ್ಥಿಕ ಬೆಳವಣಿಗೆಯಲ್ಲಿ ದೇಶಕ್ಕೆ ಮಾದರಿಯಾಗಿರುವ, ಇಡೀ ಎಷ್ಯಾದಲ್ಲೇ ನಂಬರ್ 1 ಎನ್ನಿಸಿಕೊಂಡಿರುವ, 24 ಘಂಟೆಗಳ ಕಾಲವೂ ರೈತರಿಗೆ ವಿದ್ಯುತ್ ಒದಗಿಸುವ ಏಕೈಕ ರಾಜ್ಯವಾದ ಗುಜರಾತ್ ನ ನಂಬರ್ 1 ಮುಖ್ಯಮಂತ್ರಿ ನರೇಂದ್ರ ಮೋದಿಯವರೂ ಈ politics of victimhood ಗೆ ಹೊರತಾಗಿಲ್ಲ.ಗೋಧ್ರ ಹತ್ಯಾಕಾಂಡದ ವಿಚಾರಣೆ ವೇಳೆ ಮೋದಿ ಹಾಜರಾಗದೆ ಗಂಭೀರ ತಪ್ಪೆಸಗಿದ್ದಲ್ಲದೇ, ವಿವಾದ ಹುಟ್ಟಿಕೊಂಡಾಗ ಇದು ಪ್ರತಿಪಕ್ಷದವರು ನನಗೆ ಕೆಟ್ಟ ಹೆಸರು ತರಲು ನಡೆಸಿರುವ ಸಂಚು ಎಂದು ನುಡಿದಿದ್ದರು!! ( for further reading- http://ibnlive.in.com/blogs/rajdeepsardesai/1/61699/the-politics-of-victimhood.html).



ಇನ್ನು ಶಿವಸೇನೆಯೆಂಬ ಎಲ್ಲಾ ಚುನಾವಣೆಗಳಲ್ಲೂ ಜನರಿಂದ ಛೀಮಾರಿ ಹಾಕಿಸಿಕೊಳ್ಳುವ ಪಕ್ಷವೊಂದು ಮುಂಬೈ ಯನ್ನು ಹಾಸ್ಯನಾಟಕಮಂದಿರವನ್ನಾಗಿಸಿದೆ.ತಮ್ಮ ಪಕ್ಷದ ಮೌಲ್ಯಗಳು, ಉದ್ದೇಶಗಳ ಬಗ್ಗೆ ನಾಯಕರಿಗೇ ಸ್ಪಷ್ಟತೆ ಇಲ್ಲ. ಭಾರತೀಯರ ಮೇಲೆ ಪಾಕಿಸ್ತಾನಿ ಭಯೋತ್ಪಾದಕರಿಂದ, ಆಸ್ಟ್ರೇಲಿಯನ್ನರಿಂದ ಹಲ್ಲೆ ನಡೆಯುತ್ತಿದೆ ಎಂದು ಪ್ರತಿಭಟಿಸುವ ಇವರಿಗೆ, ತಾವು ಹೊಡೆದು-ಬಡಿದು, ಹಿಂಸೆ ನೀಡುವ non-maharashtrians ಕೂಡ ಭಾರತೀಯರು ಎಂಬುದು ಮರೆತೇ ಹೋಗಿರುತ್ತದೆ. ಉಳಿದ ಸಮಯದಲ್ಲಿ ಅನ್ಯರಿಗೆ ಜಾಗವಿಲ್ಲ, ಮುಂಬೈ ನಮ್ಮದು ಎಂದು ಒದರಿಕೊಳ್ಳುವ ಇವರು, 26/11 ದಾಳಿಯ ಸಮಯದಲ್ಲಿ ಎಲ್ಲಿ ಅಡಗಿ ಕುಳಿತಿದ್ದರೋ? ನಿಷ್ಠಾವಂತ ಪೋಲಿಸ್ ಅಧಿಕಾರಿಗಳು ಹತರಾದರು, NSG commando ಗಳು ಬಲಿಯಾದರು, ನಮಗೆ ಯಾರ ಸಹಾಯವೂ ಬೇಕಾಗಿಲ್ಲ, ಮುಂಬೈ ನಮ್ಮದು, ಅದನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ ಎಂದೇಕೆ ಹೇಳಲಿಲ್ಲ? ಇಂಥ ಬರೀ ಬಡಾಯಿಕೋರರು, pseudo-ಮರಾಠಿ ಪ್ರೇಮಿಗಳು ದೇಶವಾಸಿಗಳ ಅಷ್ಟೇಕೆ ವಿದೇಶೀಯರ ದೃಷ್ಟಿಯಲ್ಲಿ ಮುಂಬೈ ಚಿತ್ರಣವೇ ಬದಲಾಗುವಂತೆ ಮಾಡಿ ದೇಶದ ಶಾಂತಿಭಂಗಕ್ಕೆ ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ!!! ಇಂಥವರು ಅಂಧ ಮರಾಠಿಗರಂತೆ ವರ್ತಿಸುತ್ತಾ ಭಾರತೀಯತೆಯನ್ನೇ ಮರೆತುಬಿಟ್ಟಿದ್ದಾರೆ.

ಇಂಥಹ ಅಪಸವ್ಯಗಳಿಗೆ ಕೊನೆ ಎಲ್ಲಿ? ಶಿವ ಶಿವಾ, please save my Nation…!!!

ಮಂಗಳವಾರ, ಮಾರ್ಚ್ 2, 2010

ಸ್ವಾತಂತ್ರ್ಯ ಎನ್ನುವುದು ಅದೆಷ್ಟು ಅಮೂಲ್ಯ ಅಲ್ಲವೇ?



`ನಮ್ಮದು ಚೈನಾದಲ್ಲಿ ನೆಲೆಸಿದ್ದ ಟಿಬೇಟಿಯನ್ ಮೂಲದ ಕುಟುಂಬ, ಮೂಲತಃ ರಾಜಮನೆತನದವರಾದ ಕಾರಣ ವಿಶಾಲವಾದ ಮನೆಯಿತ್ತು,ಮನೆಯ ತುಂಬಾ ಜನರಿದ್ದರು,125 ಮಂದಿ ಕೆಲಸಗಾರರಿದ್ದರು.ಇದ್ದಕ್ಕಿದ್ದಂತೆ ಒಂದು ದಿನ ನಮ್ಮ ಮನೆಯ ಮೇಲೆ ದಾಳಿ ನಡೆಯಿತು.ನಮ್ಮ ಮನೆಯನ್ನು ವಿಭಾಗಿಸಿ ಎಲ್ಲಾ ನೌಕರರಿಗೂ ನೀಡಲಾಯಿತು, ನಮ್ಮ ದೊಡ್ಡ ಕುಟುಂಬಕ್ಕೆ ಕೇವಲ ಒಂದೇ ಕೋಣೆ ಕೊಡಲಾಯಿತು.ನಮ್ಮ ಎಲ್ಲಾ ಆಸ್ತಿ-ಪಾಸ್ತಿಗಳೂ ಹರಿದು ಹಂಚಿ ಹೋದವು.ಅಲ್ಲದೆ ನಮ್ಮ ಕುಟುಂಬದವರು ಕಮ್ಯುನಿಸಮ್ ನ್ನು ಬೆಂಬಲಿಸದ ಕಾರಣ ನನ್ನ ತಾತನನ್ನು(ತಂದೆಯ ತಂದೆ)ಕೊಲ್ಲಲಾಯಿತು,ಉಳಿದವರ ಉಗುರುಗಳ ಕೆಳಗೆ ಬಿದಿರಿನ ಮೊಳೆಗಳನ್ನು ಚುಚ್ಚಿ ಹಿಂಸೆ ನೀಡಲಾಗುತ್ತಿತ್ತು.ಹಿಂಸೆ ತಾಳಲಾರದೆ ನನ್ನ ತಾಯಿಯ ತಂದೆ ನದಿಯಲ್ಲಿ ಹಾರಿ ಪ್ರಾಣ ಕಳೆದುಕೊಂಡರು.ಶಾಲೆಯಲ್ಲಿಯೂ ಸಹ ಬಹಳ ತಾರತಮ್ಯ ನಡೆಯುತ್ತಿತ್ತು. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಕಮ್ಯುನಿಸಮ್ ನ್ನು ಒಂದು ವಿಷಯವಾಗಿ ಹೇಳಿಕೊಡಲಾಗುತ್ತಿತ್ತು, ನಮ್ಮ ಆಸಕ್ತಿ, ಸಾಧನೆ ಹಾಗೂ ಕುಟುಂಬದ ಹಿನ್ನೆಲೆಯ ಆಧಾರದ ಮೇಲೆ ಕಮ್ಯುನಿಸ್ಟ್ ಸೈನಿಕರ ರಕ್ತದ ಸಂಕೇತವಾದ ಕೆಂಪು ಧ್ವಜವನ್ನು compliment ಆಗಿ ನೀಡಲಾಗುತ್ತಿತ್ತು.ಆ ಧ್ವಜವನ್ನು ಕತ್ತಿನ ಸುತ್ತ ಸುತ್ತಿಕೊಂಡ ಮಕ್ಕಳು ಬಹಳ ಪ್ರಭಾವಿ ಎನ್ನಿಸಿಕೊಳ್ಳುತ್ತಿದ್ದರು, ಅವರು ಧ್ವಜವಿಲ್ಲದ ನಮ್ಮನ್ನು ಶತ್ರುಗಳ ಮಕ್ಕಳು ಎಂದು ಕರೆಯುತ್ತಿದ್ದರು.ನಮ್ಮ ಮೇಲೆ ದಬ್ಬಾಳಿಕೆ ನಡೆಸುವ ಅಧಿಕಾರ ಕೂಡ ಅವರಿಗಿತ್ತು, ಕಮ್ಯುನಿಸ್ಟ್ ಶಿಕ್ಷಕರು ಕೂಡ ಅದನ್ನು ತಡೆಯುವ ಪ್ರಯತ್ನ ಮಾಡುತ್ತಿರಲಿಲ್ಲ.

ಹೀಗೆ ಬಾಲ್ಯವನ್ನು ಕಳೆದ ನಾನು ಅಲ್ಲಿಯೇ ಇದ್ದರೆ ನೆಮ್ಮದಿಯಾಗಿರಲು ಸಾಧ್ಯವಿಲ್ಲ ಎಂದು ನನ್ನ ತಂದೆಗೆ ಅನ್ನಿಸಿರಬೇಕು,ಅವರು ನನ್ನನ್ನು ಕಾಲೇಜ್ ಶಿಕ್ಷಣಕ್ಕಾಗಿ ಭಾರತಕ್ಕೆ ಕಳುಹಿಸಿದರು.ಇಲ್ಲಿ ಬಂದ ಮೇಲೆ ಇಲ್ಲಿನ ಟಿಬೆಟ್ ಯುವಕರನ್ನು ಸಂಘಟಿಸುವ ಕೆಲಸಕ್ಕೆ ಮುಂದಾದೆ. ಈ ವಿಷಯದ ಸುಳಿವು ಅಲ್ಲಿನ ಕಮ್ಯುನಿಸ್ಟ್ ಸರಕಾರಕ್ಕೆ ಹೇಗೋ ಸಿಕ್ಕಿ, ಈಗ ಚೈನಾ-ಟಿಬೆಟ್ ಬಾಗಿಲು ನನಗಾಗಿ ಮುಚ್ಚಿಹೋಗಿದೆ.ಅಲ್ಲಿ ಹೋದರೆ ಖಂಡಿತಾ ಹಿಂತಿರುಗಿ ಬರಲು ಸಾಧ್ಯವಿಲ್ಲ, ಕಮ್ಯುನಿಸ್ಟರು ನನ್ನನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ತಂದೆ ತೀರಿಕೊಂಡಾಗಲೂ ನನಗೆ ವಿಷಯವನ್ನೇ ತಿಳಿಸಿರಲಿಲ್ಲ. ನಮ್ಮ ಕುಟುಂಬ ಈಗ ಛಿದ್ರ-ಛಿದ್ರವಾಗಿದೆ, ಅವರನ್ನೆಲ್ಲಾ 12 ವರ್ಷಗಳಿಂದ ನಾನು ನೋಡಿಲ್ಲ, ಇನ್ನೆಂದಾದರೂ ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ.'

ಹೀಗೆ ಆತ ಹೇಳುತ್ತಿದ್ದರೆ ನಾನು ದಂಗಾಗಿ ಹೋಗಿದ್ದೆ.ಇಂಥ ವಿಷಯಗಳನ್ನೆಲ್ಲ ಪತ್ರಿಕೆ-ಪುಸ್ತಕಗಳಲ್ಲಿ ಓದುತ್ತಿದ್ದರೂ ಸ್ವಂತ ಅನುಭವವನ್ನು ಹೀಗೆ ಕಿವಿಯಾರೆ ಕೇಳಿಸಿಕೊಂಡಿದ್ದು ಅದೇ ಮೊದಲು.ಈ`ಸ್ವಾತಂತ್ರ್ಯ' ಎಂಬ ಶಬ್ದವನ್ನು ಕೇಳಿದರೆ ನಮಗೆ ಏನೂ ವಿಶೇಷ ಎನ್ನಿಸುವುದೇ ಇಲ್ಲ.ನಾವೆಲ್ಲ ಹುಟ್ಟುವುದಕ್ಕಿಂತ ಮುಂಚೆಯೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು.ಪ್ರತೀವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರೂ ಅದೊಂದು ನಾವು ಆಚರಿಸಿಕೊಂಡು ಬಂದ ರೂಢಿಯಷ್ಟೇ.

`ನಮಗೆಲ್ಲಾ ಅದು ಅನಾಯಾಸವಾಗಿ ದೊರಕುವ ಸಹಜ ಸ್ಥಿತಿ ಎಂದು ಅಲಕ್ಷಿಸುವ ಮಟ್ಟಕ್ಕೆ ಹೋಗಿದ್ದೇವೆ.ನನಗೂ ಸ್ವಾತಂತ್ರ್ಯದ ಬಗ್ಗೆ ನಮ್ಮ ಜೋಭದ್ರಗೇಡಿ ರಾಜಕಾರಣಿಗಳು ತಮ್ಮ ಚರ್ವಿತಚರ್ವಿಣ ಭಾಷೆಯಲ್ಲಿ ಉದ್ದುದ್ದ ಭಾಷಣ ಕೊಡುವಾಗ, ಅವರು ಹೊಗಳುತ್ತಿರುವ ಸ್ವಾತಂತ್ರ್ಯ ಇದ್ದರೆಷ್ಟು ಹೋದರೆಷ್ಟು ಎನ್ನುವ ಉದಾಸೀನ ಮೂಡುತ್ತದೆ'.ಮಿಲೇನಿಯಮ್ ಸರಣಿಯ 'ಮಹಾಯುದ್ಢ-2' ಪುಸ್ತಕದ ಮುನ್ನುಡಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ಈ ಮಾತುಗಳನ್ನು ನೋಡಿದರೆ ಇದಕ್ಕೆ ನಾವ್ಯಾರೂ ಹೊರತಲ್ಲ ಎನ್ನಿಸುತ್ತದೆ.

ಮೇಲೆ ನೀಡಿದ ನನ್ನ ಸ್ನೇಹಿತರೊಬ್ಬರ ಅನುಭವ ತೀರಾ ದಾರುಣವೆಂದೆನಿಸದಿರಬಹುದು, ಆದರೆ ಕಮ್ಯುನಿಸಮ್ ನ ಅತ್ಯಂತ ಹೇಯ ಕೃತ್ಯಗಳಿಗೆ ಸಾಕ್ಷಿಯಾದ ಇಪ್ಪತ್ತನೇ ಶತಮಾನದಲ್ಲಿ ಜನರು ಸ್ವಾತಂತ್ರಕ್ಕಾಗಿ ಜೀವನಪರ್ಯಂತ ಹಪಹಪಿಸಿದ್ದಾರೆ,ಪ್ರಾಣದ ಹಂಗು ತೊರೆದು ಹೋರಾಡಿದವರಲ್ಲಿ ಹೆಚ್ಚಿನವರು ಅಮಾನುಷವಾಗಿ ಕೊಲೆಯಾಗಿ ಹೋಗಿದ್ದಾರೆ.ಯಾವುದೋ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದ ಜನರಿಂದಾಗಿ ರಕ್ತದ ಕೋಡಿಯೇ ಹರಿದಿದೆ.ಕಮ್ಯುನಿಸಮ್ ನ ದಬ್ಬಾಳಿಕೆಗೆ ಒಳಗಾದವರಲ್ಲಿ ಒಬ್ಬರಾದ ಪೋಲಿಷ್ ಅಧಿಕಾರಿ ಸ್ಲಾಮೋಮಿರ್ ರಾವಿಸ್ ಅವರ The Long Walk'ಪುಸ್ತಕವನ್ನು ತೇಜಸ್ವಿಯವರು 'ಮಹಾ ಪಲಾಯನ' ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.ಅದನ್ನು ಓದಿದರೆ ಮಾನವ ಇತಿಹಾಸದಲ್ಲಿ ಬಹುಶಃ ಇದೇ the longest walk ಇರಬಹುದೇನೋ ಎನಿಸುತ್ತದೆ.ಉತ್ತರದ ಆರ್ಕಿಟೆಕ್ಟ್ ಪ್ರದೇಶದ ಹತ್ತಿರವಿರುವ ಸೈಬೀರಿಯಾದಲ್ಲಿ ಕಮ್ಯುನಿಸ್ಟ್ ಆಡಳಿತಗಾರರಿಂದ ಶ್ರಮ ಶಿಬಿರಗಳು ನಡೆಸಲ್ಪಡುತ್ತಿದ್ದವು.ಕಮ್ಯುನಿಸಮ್ ನ್ನು ವಿರೋಧಿಸಿದಕ್ಕಾಗಿ ಲೇಖಕರಿಗೆ ದೊರೆತ ಶಿಕ್ಷೆ 25 ವರ್ಷಗಳ ಕಾಲ ಶ್ರಮ ಶಿಬಿರದಲ್ಲಿ ಖೈದಿಯಾಗಿರುವುದು.ಜೀವನಪರ್ಯಂತ ಕತ್ತೆ ದುಡಿದ ಹಾಗೆ ದುಡಿದು, ದೌರ್ಜನ್ಯದಲ್ಲಿ ಬಾಳುವುದಕ್ಕಿಂತ ಸಾಯುವುದು ವಾಸಿ ಎಂದುಕೊಂಡ ಅವರು ಸಮಾನ ಮನಸ್ಕರ ಒಂದು ಗುಂಪು ಕಟ್ಟಿಕೊಂಡು ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ.ಮರಗಟ್ಟುವ ಆ ಚಳಿಯಲ್ಲಿ ವಿಶಾಲವಾದ ಸಮುದ್ರದಂತಹ ಕಾಡುಗಳು, ಬೆಟ್ಟ ಗುಡ್ಡ, ನದಿಗಳು, ಮರುಭೂಮಿಗಳು ಎಲ್ಲವನ್ನೂ ದಾಟಿ ಅವರು ಭಾರತವನ್ನು ಸೇರಲು ಒಂದು ವರ್ಷಗಳ ಕಾಲ ಕಾಲ್ನಡಿಗೆಯಲ್ಲಿ ಕ್ರಮಿಸಿದ ದೂರ ಬರೋಬ್ಬರಿ 4000 ಮೈಲಿಗಳಿಗಿಂತಲೂ ಹೆಚ್ಚು!! ಅವರು ಆ ಸಂದರ್ಭದಲ್ಲಿ ಪಟ್ಟ ಕಷ್ಟ, ಅನುಭವಿಸಿದ ನೋವು, ಮರುಭೂಮಿಯ ವಿಷಹಾವುಗಳನ್ನೂ ಬಿಡದೆ ಸಿಕ್ಕಸಿಕ್ಕ ಪ್ರಾಣಿಗಳನ್ನು ತಿಂದು ಜೀವ ಉಳಿಸಿಕೊಂಡ ಪರಿಯನ್ನು ಓದಿದರೆ ನಿಜಕ್ಕೂ ಸಂಕಟವಾಗುತ್ತದೆ.


ಇನ್ನು ಲೇಖಕರು ತಮ್ಮ ಗುರಿಯನ್ನಾಗಿ ಭಾರತವನ್ನೇಕೆ ಆಯ್ಕೆ ಮಾಡಿಕೊಂಡರು ಎಂದು ಯೋಚಿಸಿ ನೋಡಿ, ನಾವೆಷ್ಟು ಪುಣ್ಯವಂತರು ಎಂದು ತಿಳಿಯುತ್ತದೆ!ಅಲ್ಲದೇ ಯಹೂದಿಗಳಿಗೆ, ಪಾರ್ಸಿಗಳಿಗೆ,ಟಿಬೆಟಿನ ಬೌದ್ಧರಿಗೆ, ನಿರಾಶ್ರಿತ ಮುಸ್ಲಿಂ-ಕ್ರಿಶ್ಚಿಯನ್ನರಿಗೆ ಎಲ್ಲರಿಗೂ ಆಶ್ರಯ ನೀಡಿದ ದೇಶ ನಮ್ಮದು.ನೀವೇನೇ ಹೇಳಬಹುದು,ಬಡತನ,ನಿರುದ್ಯೋಗ,ಭೃಷ್ಟತೆ,ಅನಕ್ಷರತೆಗಳ ನಿರ್ಮೂಲನೆಗೆ ಕಮ್ಯುನಿಸಂ ಸರಿಯಾದ ಮಾರ್ಗ ಎಂದೋ ಅಥವಾ ಎಲ್ಲರಿಗೂ ಅಶ್ರಯ ನೀಡುವ ಉದಾರ ಮನೋಭಾವನೆಯೇ ನಮಗೆ ಮುಳುವಾಗಿದೆ ಎಂದೋ ವಾದಿಸಬಹುದು.ಆದರೆ ಬಡತನದಂತಹ ಸಮಸ್ಯೆ ಯಾವ ದೇಶದಲ್ಲಿಲ್ಲ ಹೇಳಿ?ಚೈನಾದ ನನ್ನ ಸ್ನೇಹಿತರ ಕುಟುಂಬದ ಆಸ್ತಿಯನ್ನು ಹಂಚಿಕೊಂಡ ನೌಕರರೆಲ್ಲರೂ ಅದನ್ನು ಉಳಿಸಿಕೊಂಡು,ಬೆಳೆಸುವುದು ಹೇಗೆಂದು ತಿಳಿಯದೆ ನಾಲ್ಕೇ ವರ್ಷದಲ್ಲಿ ಮತ್ತೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದರಂತೆ.ಹಾಗಾಗಿ ಇಂಥ ಕ್ಷುಲ್ಲಕ ಕಾರಣಗಳಿಗೆ ದೇಶದ ಕಟ್ಟಕಡೆಯ ಪ್ರಜೆಗೂ ಸಮಾನ ಅವಕಾಶ ನೀಡುವ ಪ್ರಜಾಪ್ರಭುತ್ವವನ್ನು ಹಳಿಯುವುದು ತಪ್ಪು ಅನ್ನಿಸುತ್ತದೆ ನನಗೆ.

ನಾನು ಇತಿಹಾಸವನ್ನು ತುಂಬಾ ಓದಿಕೊಂಡವಳಲ್ಲ, ಕಮ್ಯುನಿಸಂ, ಮಾವೊ ಝಿಡುಂಗ್ ನ ಮಾವೊವಾದಗಳ ಬಗ್ಗೆ ಗೊತ್ತಿರುವುದು ಚೂರುಪಾರು ಮಾತ್ರ.ಆದರೆ ಇಂಥ ಅನುಭವಗಳನ್ನು ಸ್ವತಃ ಕೇಳಿದಾಗ ನಮಗೆ ದೊರೆತಿರುವ ಸ್ವಾತಂತ್ರ್ಯ ಅದೆಷ್ಟು ಅಮೂಲ್ಯ ಎಂದೆನಿಸಿತು.ಹಾಗೆಯೇ ನಮ್ಮ ಹಿರಿಯರು ಕೊಟ್ಟ ಬಳುವಳಿಯಾದ ಪ್ರಜಾಪ್ರಭುತ್ವವನ್ನು ಭೃಷ್ಟ ರಾಜಕಾರಣಿಗಳಿಂದ, ಕೆಟ್ಟ ಜನರಿಂದ ದುರುಪಯೋಗಗೊಳ್ಳದಂತೆ ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎನಿಸಿತು, ನೀವೂ ಒಪ್ಪುತ್ತೀರೆಂದು ಭಾವಿಸುತ್ತೇನೆ.

ಬುಧವಾರ, ಫೆಬ್ರವರಿ 17, 2010

ಆಟೊ, ಕ್ಯಾಬ್ ಡ್ರೈವರ್ ಗಳಲ್ಲಿರುವ ಕನ್ನಡಾಭಿಮಾನ ನಮ್ಮಲ್ಲೇಕಿಲ್ಲ?



(ನವೆಂಬರ್ 12 ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಬರಹ...)


ಬೆ೦ಗಳೂರಿನ ಬಹುರಾಷ್ಟ್ರೀಯ ಕ೦ಪೆನಿಗಳಲ್ಲಿ ಹಬ್ಬ ಹರಿದಿನಗಳ೦ದು ಕಚೇರಿಗಳ೦ದು ದುಬಾರಿ ವಸ್ತುಗಳಿ೦ದ(ಸಾ೦ಪ್ರದಾಯಿಕವಾಗಿ ಅಲ್ಲದಿದ್ದರೂ) ಅಲ೦ಕರಿಸುವುದು, ಅದೇ ನೆಪದಲ್ಲಿ ಮಧ್ಯರಾತ್ರಿಯವರೆಗೆ ಪಾರ್ಟಿ ಮಾದುವುದು ಒ೦ದು ಫ್ಯಾಶನ್.ಗಣೇಶನ ಹಬ್ಬ, ದೀಪಾವಳಿಯ ಆಚರಣೆ ಕೂಡ ಪಾರ್ಟಿ ಮೂಲಕವೇ.ಇನ್ನು ಕ್ರಿಸ್ಮಸ್, ನ್ಯೂಇಯರ್ ಬ೦ತೆ೦ದರೆ ಸಾಕು, ಪಾಶ್ಚಾತ್ಯ ಮನಸ್ಸಿನ ಭಾರತೀಯರಿಗೆ ಸ೦ಭ್ರಮವೋ ಸ೦ಭ್ರಮ.ಕ೦ಪೆನಿಯ ಬಹುಮಹಡಿ ಕಟ್ಟಡಗಳು ರ೦ಗೇರುವುದು ಈ ಸ೦ದರ್ಭದಲ್ಲಿಯೇ.

ಹೀಗೆ ಇ೦ಥ ಸ೦ಸ್ಕ್ರತಿಗೆ ಈಗಾಗಲೇ ಹೊ೦ದಿಕೊ೦ಡಿರುವ ನನಗೆ ದೀಪಾವಳಿ ಹಬ್ಬದ ಮೋಜು ಮಸ್ತಿಯ ನ೦ತರ, ಈಗಿನಿ೦ದಲೇ ಕ್ರಿಸ್ಮಸ್, ನ್ಯೂಇಯರ್ ಪಾರ್ಟಿಗಳ ನಿರೀಕ್ಷೆ.ಹೀಗೆಯೇ ಒ೦ದು ದಿನ ಕೆಲಸ ಮುಗಿಸಿ, ಉದ್ಯೋಗಿಗಳನ್ನು ಮನೆ ತಲುಪಿಸಲೆ೦ದೇ ಇರುವ ಕ್ಯಾಬ್ ಗಳು ನಿ೦ತಿರುವ ಸ್ಥಳಕ್ಕೆ ಹೋದರೆ ಎನೋ ಹೊಸತನ.ವಾಹನಗಳನ್ನೆಲ್ಲಾ ಸಿ೦ಗರಿಸಲಾಗಿದೆ.ಎಲ್ಲೆಲ್ಲೂ ಹೂವಿನ ಹಾರ, ಕನ್ನಡ ಧ್ವಜ.ಆಗಲೇ ನೆನಪಾಗಿದ್ದು, ಇನ್ನೊ೦ದು ದಿನ ಕಳೆದರೆ ನಮ್ಮೆಲ್ಲರ ಹೆಮ್ಮೆಯ ಕನ್ನಡ ರಾಜ್ಯೋತ್ಸವ ಎ೦ದು!!

ಹೌದಲ್ಲವಾ, ಎ೦ದುಕೊ೦ಡೆ, ಒ೦ದು ಕ್ಶಣ ನಮ್ಮ ಬಗ್ಗೆಯೇ ಬೇಸರವಾಯಿತು.ಆಟೋ, ಕ್ಯಾಬ್ ಡ್ರೈವರ್ ಗಳಿಗೆ ಅಷ್ಟೊ೦ದು ಸ೦ಭ್ರಮ ತರುವ ರಾಜ್ಯೋತ್ಸವ ನಮಗೇಕೆ ಬೇಕಾಗಿಲ್ಲ?ಕ್ರಿಸ್ಮಸ್-ನ್ಯೂಇಯರ್ ಗಾಗಿ ಕಾಯುವ, ಅದ್ಧೂರಿಯಾಗಿ ಆಚರಿಸುವ ಕನ್ನಡಿಗರಿಗೆ ಇ೦ದು ನಮ್ಮ ರಾಜ್ಯದ ಹಬ್ಬ ಎ೦ದು ಕನಿಷ್ಟ ಪಕ್ಷ ನೆನಪಿಸಿಕೊಳ್ಳುವ ಮನಸ್ಠಿತಿ ಇಲ್ಲ.ಕ೦ಪೆನಿಗಳಲ್ಲಿ ಕನ್ನಡೇತರರೇ ಸಾಕಷ್ಟಿದ್ದರೂ (ಹೆಚ್ಚಾಗಿದ್ದಾರೆ ಎ೦ದರೂ ತಪ್ಪಿಲ್ಲ) ಕನ್ನಡಿಗರಾದ ನಾವೇ ತಮ್ಮತನವನ್ನು ಮರೆತಿದ್ದೆವೆಯೇ?ಇಲ್ಲಿನ ಸ೦ಪನ್ಮೂಲಗಳಿ೦ದಲೇ ಉಸಿರಾಡುತ್ತಿರುವ ವಿದೇಶಿ ಕ೦ಪೆನಿಗಳಿಗೆ ಇಲ್ಲಿನವು ವಿಶೇಷ ಅನ್ನಿಸುವುದೇ ಇಲ್ಲ, ಯಾಕೋ?

ಇನ್ನು ಕನ್ನಡಿಗರ ಜೀವನ ಶೈಲಿಯೇ ಇ೦ಗ್ಲೀಷ್ ಮಯ.ಅಲ್ಲದೇ ಉತ್ತರ ಭಾರತ ಮೂಲದ ಸಹೋದ್ಯೋಗಿಗಳೊ೦ದಿಗೆ ಹಿ೦ದಿ, ಇ೦ಗ್ಲೀಷ್ ಎರಡನ್ನೂ ಬೆರೆಸಿ ಮಾತನಾಡುವುದು ಇನ್ನೂ ಫ್ಯಾಶನ್.ಹಿ೦ದಿಯಲ್ಲಿ ಮಾತನಾಡಲು ನಿಮಗೆ ಬರುವುದಿಲ್ಲ ಎ೦ದಾದರೆ ಪ೦ಜಾಬಿ,ಬಿಹಾರಿಗಳ ಮು೦ದೆ, ಅಷ್ಟೇಕೆ ಕನ್ನಡಿಗರ ದೃಷ್ಟಿಯಲ್ಲೇ ನೀವು ಪೆಕರರಾಗುತ್ತೀರಿ.ಈಗಿನ ಟ್ರೆ೦ಡ್ ಗೆ ‘ಅಪ್ ಡೇಟೆಡ್’ಅಲ್ಲ ಎನ್ನಿಸಿಕೊಳ್ಳುತ್ತೀರಿ.ಬೆ೦ಗಳೂರಿನ ಜನ ಹ೦ದಿ ಜ್ವರಕ್ಕೆ ಇತ್ತೀಚಿಗಷ್ಟೇ ಪರಿಚಿತರಾಗಿದ್ದರೂ ವಾಸಿಯೇ ಆಗದ ‘ಹಿ೦ದಿ ಜ್ವರ’ಮಾತ್ರ ನಮ್ಮವರನ್ನು ಯಾವತ್ತೋ ಆವರಿಸಿಕೊ೦ಡುಬಿಟ್ಟಿದೆ.

ಇನ್ನು ಕನ್ನಡ ಪತ್ರಿಕೆಗಳ೦ತೂ ಕ೦ಪೆನಿಗಳನ್ನು ತಲುಪುವುದೇ ಇಲ್ಲ ಬಿಡಿ, ಕನಿಷ್ಟ ಅ೦ತರ್ಜಾಲದ ಮೂಲಕವಾದರೂ ಬಿಡುವಿನ ವೇಳೆಯಲ್ಲಿ ಒದೋಣವೆ೦ದರೆ ಅಲ್ಲೂ ಆಘಾತ.‘ಪರವಾಗಿಲ್ರೀ, ಕನ್ನಡ ಪೇಪರ್ ಬೇರೆ ಒದ್ತೀರಾ?’ಅ೦ತ ಪಕ್ಕದ ಸಹೋದ್ಯೋಗಿಯೊಬ್ಬರು ಕೇಳಿದಾಗ ನಗಬೇಕೋ ಅಳಬೇಕೋ ತಿಳಿಯಲಿಲ್ಲ.ಸಧ್ಯ, ಅದನ್ನಾದರೂ ಕನ್ನಡದಲ್ಲೇ ಪ್ರಶ್ನಿಸಿದರಲ್ಲಾ ಎನ್ನುವುದೊ೦ದೇ ಸಮಾಧಾನ!

ಬೆ೦ಗಳೂರಿನಲ್ಲಿ ಇವತ್ತು ಕನ್ನಡ ಉಳಿದುಕೊ೦ಡಿದೆ ಎ೦ದಾದರೆ ಅದು ಖ೦ಡಿತವಾಗಲೂ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ವಲಸೆ ಬಂದಿರುವ ಬಂದಿರುವ ಜನರಿಂದ ಮಾತ್ರ.ಕನ್ನಡವನ್ನೇ ಆಧಾರವಾಗಿಟ್ಟುಕೊಂಡ ಯುವ ಪತ್ರಕರ್ತರು,ಲೇಖಕರಲ್ಲಿ ಬಹುತೇಕರು ಮೂಲತಃ ಬೆಂಗಳೂರಿನವರಲ್ಲ.ಇಲ್ಲಿನವರದ್ದು ಒಂದೇ ಮಾತು,'ಕನ್ನಡದಲ್ಲಿ ಮಾತಾಡ್ತೀನಿ ಅಷ್ಟೇ,ಓದೋದು-ಬರೆಯೋದು ಕಷ್ಟ,ಅಭ್ಯಾಸನೇ ಇಲ್ವಲ್ಲಾ?'ಅಂತ. ಜೊತೆಗೆ'ನಂಗೆ ಕನ್ನಡ ಅಷ್ಟು ಸರಿಯಾಗಿ ಬರಲ್ಲ'ಎಂದು ಹೇಳುವುದೇ ಇನ್ನೊಂದು ಫ್ಯಾಷನ್ .

ಇದು ಕನ್ನಡಿಗರ ಮನಸ್ಥಿತಿಯಿಂದ ಒದಗಿರುವ ಪರಿಸ್ಥಿತಿಯೇ ಅಥವಾ ವಿದೇಶಿ ಕಂಪೆನಿಗಳು ದುಡ್ಡಿನ ಜತೆಯಲ್ಲೇ ತಂದಿರುವ ಆಧುನಿಕ ಸಂಸ್ಕ್ರತಿಯ ಪ್ರಭಾವವೇ? ಅಷ್ಟಕ್ಕೂ ಕನ್ನಡದಲ್ಲಿಯೇ ಮಾತನಾಡಿ ಆಧುನಿಕರು (modern)ಎನ್ನಿಸಿಕೊಳ್ಳಲು ಸಾಧ್ಯವೇ ಇಲ್ಲವೇ?ನಾವೂ ಕೂಡ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ ಎಂದು ಸಮರ್ಥಿಸಿಕೊಳ್ಳಲು ಇಂಗ್ಲಿಷ್ ನಲ್ಲಿ ಮಾತನಾಡುವುದು,(ಕಚೇರಿ ವಿಷಯಗಳಲ್ಲಿ ಮಾತ್ರವಲ್ಲದೇ, ಊಟ ಮಾಡುವಾಗಲೂ ಕೂಡ!)ನ್ಯೂಇಯರ,ಕ್ರಿಸ್ಮಸ್ ಗಳನ್ನು ನಮ್ಮದೇ ಹಬ್ಬಗಳಂತೆ ಆಚರಿಸುವುದೊಂದೇ ದಾರಿಯೇ?

ಹೀಗೆಯೇ ಮುಂದುವರಿದರೆ ಇಂಥ ವಾತಾವರಣ ಯುವಜನಾಂಗವನ್ನು ಎಲ್ಲಿಗೆ ಕೊಂಡೊಯ್ಯಬಹುದು? ಎಲ್ಲಿ,ಎಲ್ಲಿಯವರೆಗೆ ಬದುಕೀತು ಕನ್ನಡ?ನಾವು ಕನ್ನಡಿಗರಾಗಿ ಇಂಥ ಬೆಳವಣಿಗೆಗಳನ್ನು ವಿರೋಧಿಸಬೇಕೇ?ಅಥವಾ ಬದಲಾದ ಭಾಷಾಶೈಲಿಗೆ ನಾವೂ ಹೊಂದಿಕೊಳ್ಳಬೇಕೇ? ಅಥವಾ ಇಂಥ ಸಂಸ್ಕ್ರತಿ ಹೊಂದಿರುವ ಜಾಗಗಳನ್ನು ಹುಡುಕಿಕೊಂಡು ಮುಗಿಬೀಳುವುದೇ ನಮ್ಮಂಥವರು ಮಾಡುವ ತಪ್ಪೇ?

ಕೊನೆಯಲ್ಲಿ ಉಳಿಯುವುದು ಪ್ರಶ್ನೆಗಳು ಮಾತ್ರ.